8ನೇ ತರಗತಿ, ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ಭಾಗ-3
1 ಬಿತ್ತನೆ ಮಾಡುವ ಮೊದಲು ಮಣ್ಣನ್ನು ಸಣ್ಣ ಕಣಗಳ ಗಾತ್ರಕ್ಕೆ ಏಕೆ ಪುಡಿ ಮಾಡುತ್ತಾರೆ?
ಹೆಚ್ಚಿನ ಇಳುವರಿ ಪಡೆಯಲು.
2 ಬಿತ್ತನೆ ಮಾಡುವ ಮೊದಲು ಮಣ್ಣನ್ನು ಸಣ್ಣ ಕಣಗಳ ಗಾತ್ರಕ್ಕೆ ಪುಡಿ ಮಾಡಲು ಬಳಸುವ ಸಲಕರಣೆಗಳನ್ನು ಹೆಸರಿಸಿ.
ನೇಗಿಲು ಎಡೆಕುಂಟೆ ಮತ್ತು ಕಲ್ಟಿವೇಟರ್
3. ನೇಗಿಲಿನ ಬಗ್ಗೆ ಟಿಪ್ಪಣಿ ಬರೆಯಿರಿ.
ಮಣ್ಣನ್ನು ಉಳುಮೆ ಮಾಡಲು, ಬೆಳಗೆ ಗೊಬ್ಬರಗಳನ್ನು ಹಾಕಲು, ಕಳೆಗಳನ್ನು ತೆಗೆಯಲು, ಮಣ್ಣನ್ನು ಪುಡಿ ಮಾಡಲು ಮುಂತಾದ ಕೆಲಸಗಳಿಗೆ ಅನಾದಿಕಾಲದಿಂದಲೂ ನೇಗಿಲನ್ನು ಬಳಸಲಾಗುತ್ತಿದೆ. ಈ ಸಲಕರಣೆಯನ್ನು ಮರದಿಂದ ಮಾಡಲಾಗಿದ್ದು ಎತ್ತುಗಳಿಂದ ಅಥವಾ ಇತರ ಪ್ರಾಣಿಗಳಿಂದ(ಕುದುರೆಗಳು, ಒಂಟೆಗಳು ಇತ್ಯಾದಿ) ಎಳೆಯಲಾಗುತ್ತದೆ. ಇದು ಬಲಯುತವಾದ ತ್ರಿಕೋನಾಕಾರದ ಕಬ್ಬಿಣದ ಚೂರನ್ನು ಹೊಂದಿದ್ದು ಅದನ್ನು ನೇಗಿಲಿನ ಕುಳ ಎಂದು ಕರೆಯುತ್ತಾರೆ. ಉದ್ದನೆಯ ಮರದ ತುಂಡು ನೇಗಿಲಿನ ಮುಖ್ಯ ಭಾಗವಾಗಿದ್ದು ಅದನ್ನು ಈಚುಎಂದು ಕರೆಯುತ್ತಾರೆ. ಈಚಿನ ಒಂದು ತುದಿಯಲ್ಲಿ ಹಿಡಿಕೆ (ಮೇಳಿ) ಇರುತ್ತದೆ. ಇನ್ನೊಂದು ತುದಿಯನ್ನು ಎತ್ತುಗಳ ಕುತ್ತಿಗೆಯ ಮೇಲೆ ಇಡುವ ನೊಗಕ್ಕೆ ಕಟ್ಟಲಾಗುತ್ತದೆ. ಒಂದು ಜೊತೆ ಎತ್ತುಗಳು ಮತ್ತು ಒಬ್ಬ ಮನುಷ್ಯ ಸುಲಭವಾಗಿ ನೇಗಿಲನ್ನು ಬಳಸಬಹುದು.
4. ಎಡೆಕುಂಟೆಯ ಬಗ್ಗೆ ಟಿಪ್ಪಣಿ ಬರೆಯಿರಿ.
ಎಡೆಕುಂಟೆಯು ಸರಳವಾದ ಉಪಕರಣವಾಗಿದ್ದು ಕಳೆಗಳನ್ನು ತೆಗೆಯಲು ಮತ್ತು ಮಣ್ಣನ್ನು ಸಡಿಲಗೊಳಿಸಲು ಬಳಸುತ್ತಾರೆ. ಇದು ಮರ ಅಥವಾ ಕಬ್ಬಿಣದಿಂದಾದ ಉದ್ದನೆಯ ತುಂಡನ್ನು ಹೊಂದಿರುತ್ತದೆ. ಅಗಲವಾದ, ಬಲಯುತವಾದ ಮತ್ತು ಒಂದು ಕಬ್ಬಿಣದ ತಟ್ಟೆಯಂತಹ ರಚನೆಯನ್ನು ಇದರ ಒಂದು ತುದಿಯಲ್ಲಿ ಅಳವಡಿಸಲಾಗಿರುತ್ತದೆ ಮತ್ತು ಇದು ಬ್ಲೇಡ್ ನಂತೆ ಕೆಲಸ ಮಾಡುತ್ತದೆ. ಇದು ಸಹ ಪ್ರಾಣಿಗಳಿಂದ ಎಳೆಯಲ್ಪಡುತ್ತದೆ.
5. ಕಲ್ಟಿವೇಟರ್ ಬಗ್ಗೆ ಟಿಪ್ಪಣಿ ಬರೆಯಿರಿ.
ಇತ್ತೀಚಿನ ದಿನಗಳಲ್ಲಿ ಟ್ರ್ಯಾಕ್ಟರ್ ನಿಂದ ಎಳೆಯಲ್ಪಡುವ ಕಲ್ಟಿವೇಟರ್ ನಿಂದ ಉಳುಮೆಯನ್ನು ಮಾಡಲಾಗುತ್ತದೆ. ಕಲ್ಟಿವೇಟರ್ ನ ಬಳಕೆಯಿಂದ ದೈಹಿಕ ಶ್ರಮ ಮತ್ತು ಸಮಯದ ಉಳಿತಾಯವಾಗುತ್ತದೆ.
6. ಬಿತ್ತನೆಯ ಬೀಜಗಳು ನೀರಿನ ಮೇಲೆ ತೇಲಿದರೆ, ನೀವು ನೀಡುವ ಕಾರಣವೇನು?
ಹಾನಿಗೊಳಗಾದ ಬಿತ್ತನೆಯ ಬೀಜಗಳು ಟೊಳ್ಳಾಗಿರುತ್ತವೆ. ಆದ್ದರಿಂದ ಅವು ಹಗುರವಾಗಿರುತ್ತವೆ. ಆದ್ದರಿಂದ ಅವು ನೀರಿನ ಮೇಲೆ ತೇಲುತ್ತವೆ. ಉತ್ತಮ ಆರೋಗ್ಯಕರ ಬೀಜಗಳನ್ನು ಹಾನಿಗೊಂಡ ಬೀಜಗಳಿಂದ ಪ್ರತ್ಯೇಕಿಸಲು ಇದು ಉತ್ತಮ ವಿಧಾನವಾಗಿದೆ.
7. ಬಿತ್ತನೆಗೆ ಎಂತಹ ಬೀಜಗಳನ್ನು ಆಯ್ದುಕೊಳ್ಳಲಾಗುತ್ತದೆ?
ಬಿತ್ತನೆಗೆ ಮೊದಲು ಒಳ್ಳೆಯ ತಳಿಯ ಆರೋಗ್ಯಕರ, ಸ್ವಚ್ಛ ಮತ್ತು ಉತ್ತಮ ಗುಣಮಟ್ಟದ ಬೀಜಗಳನ್ನು ಆಯ್ದುಕೊಳ್ಳಲಾಗುತ್ತದೆ.
8. ಕೂರಿಗೆ ಎಂದರೇನು?
ಬಿತ್ತನೆಗೆ ಬಳಸುವ ಸಾಂಪ್ರದಾಯಿಕ ಸಲಕರಣೆಯು ಒಂದು ಆಲಿಕೆಯ ಆಕಾರದಲ್ಲಿರುತ್ತದೆ ಇದನ್ನು ಕೂರಿಗೆ ಎನ್ನುವರು.
9. ಕೂರಿಗೆ ಬಿತ್ತನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
ಬೀಜಗಳನ್ನು ಕೂರಿಗೆಯ ಆಲಿಕೆಯಂತಹ ಭಾಗದಲ್ಲಿ ತುಂಬಲಾಗುತ್ತದೆ. ಅವು ಚೂಪಾದ ತುದಿಗಳನ್ನು ಹೊಂದಿದ ಎರಡು ಅಥವಾ ಮೂರು ಕೊಳವೆಗಳ ಮೂಲಕ ಕೆಳಗೆ ಬರುತ್ತವೆ. ಈ ತುದಿಗಳು ಮಣ್ಣಿನೊಳಕ್ಕೆ ಚುಚ್ಚಿ ಬೀಜಗಳನ್ನು ಬಿತ್ತುತ್ತವೆ.
10. ಬಿತ್ತನೆಯ ಸಾಂಪ್ರದಾಯಿಕ ವಿಧಾನ ಯಾವುದು?
ಕೂರಿಗೆ ಬಿತ್ತನೆ
11. ಯಾಂತ್ರಿಕ ಕೂರಿಗೆ ಕುರಿತು ಟಿಪ್ಪಣಿ ಬರೆಯಿರಿ.
ಇತ್ತೀಚಿನ ದಿನಗಳಲ್ಲಿ ಟ್ರ್ಯಾಕ್ಟರ್ ನ ಸಹಾಯದಿಂದ ಯಾಂತ್ರಿಕ ಕೂರಿಗೆಯನ್ನು (seed drill) ಬಳಸಿ ಬಿತ್ತನೆ ಮಾಡಲಾಗುತ್ತಿದೆ. ಈ ಸಲಕರಣೆಯು ಸರಿಯಾದ ಆಳದಲ್ಲಿ ಮತ್ತು ಅಂತರಗಳಲ್ಲಿ ಒಂದೇ ರೀತಿಯಾಗಿ ಬೀಜಗಳನ್ನು ಬಿತ್ತನೆ ಮಾಡುತ್ತದೆ. ಬಿತ್ತನೆಯ ನಂತರ ಬೀಜಗಳು ಮಣ್ಣಿನಿಂದ ಮುಚ್ಚಿರುವುದನ್ನು ಇದು ಖಚಿತಪಡಿಸುತ್ತದೆ. ಪಕ್ಷಿಗಳು ಬೀಜಗಳನ್ನು ತಿನ್ನದಂತೆ ಇದು ರಕ್ಷಿಸುತ್ತದೆ.
ಯಾಂತ್ರಿಕ ಕೂರಿಗೆಯಿಂದ ಮಾಡುವ ಬಿತ್ತನೆಯು ಶ್ರಮ ಮತ್ತು ಸಮಯವನ್ನು ಉಳಿಸುತ್ತದೆ. ಸಸ್ಯಗಳು ಒತ್ತೊತ್ತಾಗಿ ದಟ್ಟವಾಗಿ ಬೆಳೆಯುವುದನ್ನು ತಪ್ಪಿಸಲು ಬೀಜಗಳ ನಡುವೆ ಸೂಕ್ತ ಅಂತರವಿರಬೇಕು. ಸಸ್ಯಗಳು ಸಾಕಷ್ಟು ಸೌರಬೆಳಕು, ಪೋಷಕಾಂಶಗಳು ಮತ್ತು ನೀರನ್ನು ಮಣ್ಣಿನಿಂದ ಪಡೆಯಲು ಇದು ಸಹಾಯಕವಾಗಿದೆ. ಕೆಲವು ವೇಳೆ ದಟ್ಟವಾದ ಬೆಳವಣಿಗೆಯನ್ನು ತಪ್ಪಿಸಲು ಕೆಲವು ಸಸ್ಯಗಳನ್ನು ಕಿತ್ತು ಹಾಕಬೇಕಾಗುತ್ತದೆ.
12. ಸಾವಯವ ಗೊಬ್ಬರಗಳು ಮತ್ತು ರಸಗೊಬ್ಬರಗಳು ಎಂದರೇನು?
ಸಸ್ಯಗಳ ಆರೋಗ್ಯಕರ ಬೆಳವಣಿಗೆಗೆ ಪೋಷಕಾಂಶಗಳ ರೂಪದಲ್ಲಿ ಮಣ್ಣಿಗೆ ಸೇರಿಸುವ ಪದಾರ್ಥಗಳನ್ನು ಸಾವಯವ ಗೊಬ್ಬರಗಳು ಮತ್ತು ರಸಗೊಬ್ಬರಗಳು ಎನ್ನುವರು.
13. ಗೊಬ್ಬರ ನೀಡಿಕೆ ಎಂದರೇನು?
ಮಣ್ಣು ಖನಿಜಯುಕ್ತ ಪೋಷಕಾಂಶಗಳನ್ನು ಬೆಳೆಗೆ ಒದಗಿಸುತ್ತದೆ. ನಿರಂತರವಾಗಿ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನಲ್ಲಿ ಕೆಲವು ಪೋಷಕಾಂಶಗಳ ಕೊರತೆ ಉಂಟಾಗುತ್ತದೆ ಆದ್ದರಿಂದ ಮಣ್ಣಿಗೆ ಪುನಹ ಪೋಷಕಾಂಶಗಳನ್ನು ಸೇರಿಸಲು ರೈತರು ಅವಶ್ಯವಾಗಿ ಜಮೀನಿಗೆ ಗೊಬ್ಬರಗಳನ್ನು ಹಾಕಬೇಕು ಪ್ರಕ್ರಿಯೆಯನ್ನು "ಗೊಬ್ಬರ ನೀಡಿಕೆ" ಎನ್ನುತ್ತಾರೆ.
14. ಸಸ್ಯಗಳ ದುರ್ಬಲ ಬೆಳವಣಿಗೆಗೆ ಕಾರಣವೇನು?
ಅಸಮರ್ಪಕ ಅಥವಾ ಕಡಿಮೆ ಗೊಬ್ಬರ ನೀಡಿಕೆಯು ಸಸ್ಯಗಳ ದುರ್ಬಲ ಬೆಳವಣಿಗೆಗೆ ಕಾರಣವಾಗುತ್ತದೆ.
15. ಸಾವಯವ ಗೊಬ್ಬರವನ್ನು ಹೇಗೆ ಪಡೆಯುತ್ತಾರೆ?
ಗೊಬ್ಬರವು ಒಂದು ಸಾವಯವ ಪದಾರ್ಥವಾಗಿದ್ದು ಸಸ್ಯ ಅಥವಾ ಪ್ರಾಣಿ ತ್ಯಾಜ್ಯಗಳ ವಿಘಟನೆಯಿಂದ ಪಡೆಯಲಾಗುತ್ತದೆ. ರೈತರು ಸಸ್ಯ ಮತ್ತು ಪ್ರಾಣಿ ತ್ಯಾಜ್ಯಗಳನ್ನು ಬಯಲು ಪ್ರದೇಶಗಳ ಗುಂಡಿಗಳಲ್ಲಿ ರಾಶಿ ಹಾಕಿ ವಿಘಟನೆ ಹೊಂದಲು ಬಿಡುತ್ತಾರೆ ಕೆಲವು ಸೂಕ್ಷ್ಮಜೀವಿಗಳಿಂದ ವಿಘಟನೆ ಕ್ರಿಯೆ ನಡೆಯುತ್ತದೆ. ವಿಘಟನೆ ಹೊಂದಿದ ಪದಾರ್ಥವನ್ನು ಸಾವಯವ ಗೊಬ್ಬರವಾಗಿ ಬಳಸಲಾಗುತ್ತದೆ.
16. ರಸಗೊಬ್ಬರಗಳು ಎಂದರೇನು?
ರಸಗೊಬ್ಬರಗಳು ರಾಸಾಯನಿಕ ಪದಾರ್ಥಗಳಾಗಿದ್ದು ಒಂದು ನಿರ್ದಿಷ್ಟ ಪೋಷಕಾಂಶವನ್ನು ಹೆಚ್ಚಾಗಿ ಹೊಂದಿರುತ್ತವೆ. ರಸಗೊಬ್ಬರಗಳನ್ನು ಕಾರ್ಖಾನೆಗಳಲ್ಲಿ ಉತ್ಪಾದಿಸಲಾಗುತ್ತದೆ.
17. ರಸಗೊಬ್ಬರಗಳಿಗೆ ಉದಾಹರಣೆ ಕೊಡಿ.
ಯೂರಿಯಾ
ಅಮೋನಿಯಂ ಸಲ್ಫೇಟ್
ಸೂಪರ್ ಫಾಸ್ಪೇಟ್
ಪೊಟ್ಯಾಷ್
ಎನ್.ಪಿ.ಕೆ. (ನೈಟ್ರೋಜನ್, ಫಾಸ್ಪರಸ್, ಪೊಟ್ಯಾಶಿಯಂ).
18. ರಸಗೊಬ್ಬರಗಳಿಂದೇನು ಪ್ರಯೋಜನ?
ರಸಗೊಬ್ಬರಗಳ ಬಳಕೆಯು ಗೋಧಿ, ಭತ್ತ ಮತ್ತು ಜೋಳಗಳಂತಹ ಬೆಳೆಗಳ ಅಧಿಕ ಇಳುವರಿ ಪಡೆಯಲು ರೈತರಿಗೆ ಸಹಾಯಕವಾಗಿದೆ.
19. ರಸಗೊಬ್ಬರಗಳಿಂದಾಗುವ ಕೆಡಕುಗಳನ್ನು ಬರೆಯಿರಿ.
ರಸಗೊಬ್ಬರಗಳ ಅಧಿಕ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ರಸಗೊಬ್ಬರಗಳು ಜಲಮಾಲಿನ್ಯದ ಆಕರಗಳು ಕೂಡಾ ಆಗಿವೆ.
20. ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಕೈಗೊಳ್ಳಬಹುದಾದ ಕ್ರಮಗಳನ್ನು ತಿಳಿಸಿ.
ರಸಗೊಬ್ಬರಗಳ ಬದಲಾಗಿ ಸಾವಯವ ಗೊಬ್ಬರಗಳನ್ನು ಬಳಸಬೇಕು.
ಎರಡು ಬೆಳೆಗಳ ನಡುವೆ ಸ್ವಲ್ಪಕಾಲ ಜಮೀನನ್ನು ಉಳುಮೆ ಮಾಡದೆ ಬೀಳು ಬಿಡಬೇಕು.
Comments
Post a Comment